ತಾಮ್ರಯುಗ
ಮಾನವನ ಸಾಂಸ್ಕøತಿಕ ವಿಕಾಸದಲ್ಲಿಯ ಒಂದು ಘಟ್ಟ. ಪ್ರಾಗೈತಿಹಾಸಿಕ ಸಂಸ್ಕøತಿಯನ್ನು ಯುಗತ್ರಯ (ಶಿಲಾಯುಗ, ಕಂಚಿನಯುಗ, ಕಬ್ಬಿಣಯುಗ) ವರ್ಗೀಕರಿಸುವ ವಿಧಾನವಿದೆ. ಆಯುಧೋಪಕರಣಗಳನ್ನು ತಯಾರಿಸಲು ಮಾನವ ಬಳಸುತ್ತಿದ್ದ ವಸ್ತುವಿನ ಆಧಾರದ ಮೇಲೆ ಈ ವರ್ಗೀಕರಣ ಮಾಡಲಾಗಿದೆ. ಆಯಧೋಪಕರಣಗಳ ತಯಾರಿಕೆಗೆ ತಾಮ್ರವೇ ಪ್ರಧಾನವಾಗಿದ್ದ ಕಾಲದ ಸಂಸ್ಕøತಿಯನ್ನು ಈ ವರ್ಗೀಕರಣದ ಪ್ರಕಾರ ತಾಮ್ರಯುಗ ಸಂಸ್ಕøತಿ ಎಂದೂ ಹೇಳಬಹುದು. ಆದರೆ ಈ ಖಚಿತ ಅರ್ಥದಲ್ಲಿ ಶುದ್ಧ ತಾಮ್ರಯುಗ ಸಂಸ್ಕøತಿ ಜಗತ್ತಿನ ಯಾವುದೇ ಭಾಗದಲ್ಲಿ ಎಂದಿಗೂ ಇದ್ದಂತೆ ಕಂಡುಬರುವುದಿಲ್ಲ. ಬೇರೆ ಬೇರೆ ದೇಶಗಳಲ್ಲಿ ಈ ಸಂಸ್ಕøತಿಯ ಅವಶೇಷಗಳು ಬೇರೆ ಬೇರೆ ಕಾಲಾವಧಿಯಲ್ಲಿ ಕಂಡುಬಂದಿವೆ. ಶಿಲಾಯುಗದ ಅಂತ್ಯ ಕಾಲದಲ್ಲಿ ನೈಸರ್ಗಿಕವಾಗಿ ದೊರಕುತ್ತಿದ್ದ ತಾಮ್ರವನ್ನು ಬಡಿದು ತಯಾರಿಸಿದ ವಸ್ತುಗಳು ಕಾಣಬರುತ್ತವೆ. ಆದರೆ ಈ ನೈಸರ್ಗಿಕ ತಾಮ್ರ ತುಂಬ ಮೃದುವಾದ್ದರಿಂದಲೂ ವಿರಳವಾದ್ದರಿಂದಲೂ ಕಲ್ಲಿನ ಆಯುಧಗಳ ಬಳಕೆ ಮುಂದುವರಿಯಿತು. ತವರದ ಜೊತೆ ತಯಾರಿಸಿದ ತಾಮ್ರದ ಮಿಶ್ರಲೋಹ (ಕಂಚು) ಶುದ್ಧ ತಾಮ್ರಕ್ಕಿಂತ ಗಟ್ಟಿಯಾಗೂ ಬಾಳಿಕೆಗೆ ಬರುವಂಥದೂ ಆಗಿರುತ್ತದೆಂದು ಮಾನವ ಬಹು ಬೇಗ ಕಂಡುಕೊಂಡಿರಬೇಕು. ಯೂರೋಪ್ ಮತ್ತು ಏಷ್ಯದ ಅನೇಕ ಪ್ರದೇಶಗಳಲ್ಲಿ ನವಶಿಲಾಯುಗ ಮತ್ತು ಕಂಚಿನ ಯುಗಗಳ ಮಧ್ಯದಲ್ಲಿ ತಾಮ್ರದ ಬಳಕೆ ಪ್ರಾರಂಭವಾಗುವುದು ಕಂಡುಬರುತ್ತದೆ. ಈ ಹಂತವನ್ನು ಮಾತ್ರ ತಾಮ್ರಯುಗವೆಂದು ಕರೆಯಬೇಕೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಪಶ್ಚಿಮ ಏಷ್ಯ ಪ್ರದೇಶದಲ್ಲಿ ಕ್ರಿ. ಪೂ. 4ನೆಯ ಸಹಸ್ರಮಾನದ ಪೂರ್ವಾರ್ಧದಲ್ಲಿ ಕಂಚಿನ ಬಳಕೆ ಕಂಡುಬರುತ್ತದೆ. ಈಜಿಪ್ಪಿನಲ್ಲಿ ತಾಮ್ರದ ಬಳಕೆ ಕ್ರಿ.ಪೂ. 5000 ದಿಂದ ಕಂಡುಬಂದರೂ ಅಲ್ಲಿ ಲೋಹವಿದ್ಯೆಯ ಬಗ್ಗೆ ಖಚಿತ ಆಧಾರಗಳು ಸಿಗುವುದು ಕ್ರಿ. ಪೂ. 3800 ರಿಂದ ಈಚೆಗೆ ಮಾತ್ರ. ಕ್ರೀಟ್ ಮತ್ತು ಸೈಪ್ರಸ್‍ಗಳಲ್ಲಿ ಕ್ರಿ. ಪೂ. 3000 ದಿಂದಲೂ ಸಿಸಿಲಿಯಲ್ಲಿ ಕ್ರಿ.ಪೂ. 2500ರಿಂದಲೂ ಮಧ್ಯ ಯುರೋಪಿನಲ್ಲಿ ಕ್ರಿ.ಪೂ. 2000ದಿಂದಲೂ ಬ್ರಿಟನ್ ಮತ್ತು ಸ್ಕಾಂಡಿನೇವಿಯ ಪ್ರದೇಶಗಳಲ್ಲಿ ಕ್ರಿ. ಪೂ. 1800ರಿಂದಲೂ ತಾಮ್ರ ಮತ್ತು ಕಂಚುಗಳ ಬಳಕೆ ಕಂಡು ಬರುತ್ತದೆ. ಭರತ ಉಪಖಂಡದಲ್ಲಿ ಬಲೂಚಿಸ್ತಾನ್ ಮತ್ತು ಸುತ್ತಣ ಪ್ರದೇಶದಲ್ಲಿ ಕ್ರಿ. ಪೂ. 3000ಕ್ಕೂ ಮೊದಲೆ ತಾಮ್ರದ ಬಳಕೆ ಇದ್ದಂತೆ ತೋರುತ್ತದೆ. ಹರಪ್ಪ ಸಂಸ್ಕøತಿಯಲ್ಲಿ (ಕ್ರಿ. ಪೂ. 2500 —1500) ತಾಮ್ರ ಮತ್ತು ಕಂಚಿನ ಉಪಯೋಗ ಕ್ರಮೇಣ ಅಧಿಕವಾಯಿತು. ರಾಜಸ್ಥಾನದಲ್ಲಿ ದೊರಕಿದ ಅಹಾರ ಸಂಸ್ಕøತಿಯ (ಕ್ರಿ. ಪೂ. 2000) ಅವಶೇಷಗಳಲ್ಲಿ ಧಾನ್ಯ ಬೀಸುವ ಕಲ್ಲನ್ನು ಬಿಟ್ಟರೆ ಇನ್ನಾವ ಕಲ್ಲಿನ ಉಪಕರಣಗಳೂ ದೊರಕಿಲ್ಲ. ಸಿಕ್ಕ ಉಳಿದ ಆಯುಧೋಪಕರಣಗಳೆಲ್ಲ ಬಹುಪಾಲು ತಾಮ್ರದವೇ. ಆದ್ದರಿಂದ ಅಹಾರ್ ಸಂಸ್ಕøತಿಯನ್ನು ಶುದ್ಧ ತಾಮ್ರಯುಗ ಸಂಸ್ಕøತಿಯೆಂದು ಕರೆಯಬಹುದು.											(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ